ನೆನಯಲೇ ಬೇಕಾದ ದಮನ್ ಪಾಟೀಲರೆಂಬ ಪತ್ರಿಕಾ ಕಾರ್ಯಕರ್ತ ಹಾಗೂ ಸಾಮಾಜಿಕ ಚೇತನ … . ವಿಶ್ವನಾಥ ಬಾಬುರಾವ್ ಪಾಟೀಲ (ದಮನ್ ಪಾಟೀಲ್) ಬೀದರ. ಬೀದರ ಜಿಲ್ಲೆ ಹನ್ನೆರಡನೇ ಶತಮಾನದಲ್ಲಿ ಕಾಯಕ ಜೀವಿಗಳ ಪ್ರಜಾತಾಂತ್ರಿಕ ಚಳವಳಿಯ ತವರೂರು. ನಂತರ ಈ ಭಾಗ ಹೈದರಾಬಾದ ನಿಜಾಮನ ಹಿಡಿತಕ್ಕೆ ಹೋಯಿತು. ಹಾಗಾಗಿ ಹೈದರಾಬಾದ ಕರ್ನಾಟಕದ ಭಾಗವೆಂದೇ ಗುರ್ತಿಸಲ್ಪಡುತ್ತಿದೆ. ಈಗ ಸರಕಾರ ಈ ಭಾಗವನ್ನು ಕಲ್ಯಾಣ ಕರ್ನಾಟಕವೆಂದು ಹೆಸರಿಟ್ಟರೂ ಜನಸಾಮಾನ್ಯರಲ್ಲಿ ಅದಿನ್ನೂ ನೆಲೆಯೂರಿಲ್ಲ. ಊಳಿಗಮಾನ್ಯ ಶೋಷಣೆಯ ವಿಪರೀತಗಳನ್ನು ಇಲ್ಲಿ ಈಗಲೂ ನೋಡಬಹುದಾಗಿದೆ. ರಾಜ್ಯದ ಅತ್ಯಂತ ಹಿಂದುಳಿದ ಭಾಗಗಳಲ್ಲಿ ಈ ಜಿಲ್ಲೆಯೂ ಇದೆ. ಇತ್ತೀಚೆಗೆ ನಿಧನರಾದ ರಾಜ್ಯದ ಹಿರಿಯ ಪತ್ರಕರ್ತ ವಿಶ್ವನಾಥ ಪಾಟೀಲ ಹಕ್ಯಾಳರು ಇದೇ ಜಿಲ್ಲೆಯ ಅತ್ಯಂತ ಹಿಂದುಳಿದ ತಾಲೂಕಾದ ಔರಾದಿನ ಹಕ್ಯಾಳ ಹಳ್ಳಿಯವರು. ದಮನ್ ಪಾಟೀಲರೆಂದೇ ಇವರನ್ನು ಬಹುತೇಕರು ಕರೆಯುತ್ತಿದ್ದಿದ್ದು. ಮುಂದುವರೆದ ಸಮುದಾಯದಲ್ಲಿ ಜನಿಸಿದ್ದರೂ ಅವರು ತಮ್ಮ ಕಡೆಯ ಉಸಿರಿನವರೆಗೆ ಇದ್ದಿದ್ದು ಮಾತ್ರ ದಲಿತ ದಮನಿತ ಬಡ ಸಮುದಾಯಗಳ ಜೊತೆಗೆ. ಬೀದರಿನ ಸ್ಥಳೀಯ ಭಾಷಾ ಸೊಗಡಿನಲ್ಲಿಯೇ ಮಾತನಾಡುತ್ತಿದ್ದ ದಮನ್ ಪಾಟೀಲರು ಯಾವಾಗಲೂ ಉನ್ನತಮಟ್ಟದ ಚಿಂತನೆಗಳೊಂದಿಗೆ ಕಾರ್ಯಾಚರಿಸುತ್ತಿದ್ದವರು. ಅವರು ಜಿಲ್ಲಾ ಮಟ್ಟದ ಸರಕಾರಿ ಉದ್ಯೋಗಕ್ಕೆ ಇದೇ ಕಾರಣದಿಂದಾಗಿಯೇ ರಾಜೀನಾಮೆ ನೀಡಿ ನೇರವಾಗಿ ಪತ್ರಿಕಾ ರಂಗಕ್ಕೆ ಬಂದವರು. ಬೀದ...