ಮೇಕಿಂಗ್ ಹಿಸ್ಟರಿ ಸಂಪುಟ 1 ಆಂಗ್ಲ ಮೂಲ : ಸಾಕಿ ಕನ್ನಡ ರೂಪಾಂತರ: -ಡಾ. ಕೆ ಆರ್ ಅಶೋಕ್ -ನಂದಕುಮಾರ್ ಕೆ ಎನ್ . ಕುಂಬ್ರಿಉಬ್ಬು ಪರಿಚಯ ಮೇಕಿಂಗ್ ಹಿಸ್ಟರಿ ಕರ್ನಾಟಕದ ಗತಕಾಲದ ನಿರೂಪಣೆಯೂ ಹೌದು ವಿಶ್ಲೇಷಣೆಯೂ ಹೌದು . ಭೌಗೋಳಿಕ ಮತ್ತು ಪ್ರಾಕೃತಿಕ ರೂಪಲಕ್ಷಣಗಳ ಸಂಕ್ಷಿಪ್ತ ವಿವರಗಳೊಂದಿಗೆ ಪ್ರಾರಂಭವಾಗುವ ಈ ಕೃತಿ , ಕರ್ನಾಟಕದಲ್ಲಿ ಮಾನವ ವಾಸದ ಗುರುತುಗಳು ಕಂಡು ಬಂದ ಸಮಯದಿಂದ ಆದ ಸಾಮಾಜಿಕ ಬೆಳವಣಿಗೆಗಳ ಕುರುಹುಗಳನ್ನು ಹುಡುಕುತ್ತದೆ . ಹಳೇ ಶಿಲಾ ಯುಗದ ಕಾಲದಿಂದ ಆರಂಭವಾಗುವ ಈ ಅಧ್ಯಯನ ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಗೆಲ್ಸ್ 150 ವರುಷಗಳ ಹಿಂದೆ ಅಭಿವೃದ್ಧಿ ಪಡಿಸಿದ ಚಾರಿತ್ರಿಕ ಭೌತಿಕವಾದಿ (Historical Materialism) ಮಾದರಿಯನ್ನು ಅಳವಡಿಸಿಕೊಂಡಿದೆ . ಮಾರ್ಕ್ಸ್ ಮತ್ತು ಏಂಗೆಲ್ಸ್ ಇದನ್ನು ಅಭಿವೃದ್ಧಿ ಪಡಿಸಿದ ನಂತರ ಈ ಮಾದರಿಯನ್ನು ತುಂಬ ಪರಿಣಾಮಕಾರಿಯಾಗಿ ಉಪಯೋಗಿಸಲಾಗಿದೆ. ಈ ಮಾದರಿಯು ಸಮಾಜವು ಸ್ವಯಂ ಗ್ರಹಿಕೆಯಿಂದ ಅತ್ಯದ್ಭುತ ಸಾಧನೆಗಳನ್ನು ಮಾಡುವುದಕ್ಕೆ ಸಹಾಯ ಮಾಡುವುದರ ಜೊತೆಗೆ ಸಮಾಜದ ಬದಲಾವಣೆಗೂ ತನ್ನ ಕಾಣಿಕೆಯನ್ನು ನೀಡಿದೆ . ಕರ್ನಾಟಕದ ಗತಕಾಲದ ಕುರಿತಾದ ಈ ಹುಡುಕಾಟದಲ್ಲಿ ನಾವು ಮಾರ್ಕ್ಸ್ ವಾದದ ಅಮೂಲ್ಯ ಖಜಾನೆಗೆ ಋಣಿಯಾಗಿದ್ದೇವೆ . ಇಂಡಿಯಾ ದ ಪೂರ್ವೇತಿಹಾಸವನ್ನು ಕೆಲವೇ ಕೆಲವು ಮಾರ್ಕ್ಸ್ ವಾದಿ ಇತಿಹಾಸಕಾರರು ಸಂಶೋಧಿಸಿದ್ದಾರೆ . ಸರಿಯಾದ ಇತಿಹಾಸದ...