ಗಣರಾಜ್ಯೋತ್ಸವದ ಆಚೆಗೂ… ಈಚೆಗೂ…. ಇಂಡಿಯಾ ದೇಶ ತನ್ನ 71ನೆಯ ಗಣರಾಜ್ಯೋತ್ಸವವನ್ನು ಹಾದು ಹೋಗುತ್ತಿದೆ. 1950 ಜನವರಿ 26ರಂದು ದೇಶದಲ್ಲಿ ಸಂವಿಧಾನವನ್ನು ಜಾರಿಗೆ ತರಲಾಗಿದೆ ಎಂದು ಅಧೀಕೃತವಾಗಿ ಘೋಷಿಸಲಾಯಿತು. ಇದೊಂದು ಗಣರಾಜ್ಯವೆಂದು ಕರೆಯಲಾಯಿತು. ಪ್ರಜಾಪ್ರಭುತ್ವ ವ್ಯವಸ್ಥೆ ಪ್ರಜೆಗಳ ಸಾರ್ವಭೌಮತ್ವವೇ ನೀತಿಯೆಂದು ಹೇಳಲಾಯಿತು. ಬ್ರಿಟೀಷರ ನೇರ ಆಳ್ವಿಕೆ ಕೊನೆಯಾದ ಆಗಸ್ಟ್ 15 1947 ರಿಂದ 1950ರ ಜನವರಿ 26ರವರೆಗೆ ಯೂನಿಯನ್ ಆಫ್ ಇಂಡಿಯಾ ಎಂದೇ ಕರೆಯಲಾಗಿತ್ತು. ಅವಿರತವಾಗಿ ನಡೆಸಿದ ಜನಸಾಮಾನ್ಯರ ಸ್ವಾತಂತ್ರ್ಯ ಸಂಗ್ರಾಮದ ಮೂಲಕ ಬ್ರಿಟಿಷರ ನೇರ ಆಡಳಿತದಿಂದ ಹೊರಬಂದ ನಂತರದ ಈ ಎಪ್ಪತ್ತಮೂರು ವರುಷಗಳಲ್ಲೂ ಇಂಡಿಯಾದ ಜನಸಾಮಾನ್ಯರು ನಿರಂತರವಾಗಿ ಹೋರಾಟಗಳಲ್ಲಿರಬೇಕಾದ ಅನಿವಾರ್ಯ ಸ್ಥಿತಿಯನ್ನು ಆಳುವ ಶಕ್ತಿಗಳು ಒಡ್ಡುತ್ತಲೇ ಬಂದಿವೆ. ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಿ ನೆಲೆಯೂರಬೇಕಾದರೆ ಜನತೆಯ ಸಕ್ರಿಯ ರಾಜಕೀಯ ಪಾಲ್ಗೊಳ್ಳುವಿಕೆ ಅತ್ಯಗತ್ಯವೆನ್ನುವುದು ನಿಜ. ಆದರೆ ನಮ್ಮ ದೇಶದಲ್ಲಿ ಯಾವ ಹಕ್ಕೊತ್ತಾಯಗಳನ್ನು ಮುಂದಿಟ್ಟುಕೊಂಡು ಬ್ರಿಟೀಷರ ವಿರುಧ್ಧ ಹೋರಾಡುತ್ತಾ ಬರಲಾಗಿತ್ತೋ ಮೂಲಭೂತವಾಗಿ ಅವೇ ಕಾರಣಕ್ಕಾಗೇ ಈಗಲೂ ಹೋರಾಡಬೇಕಾದ ಸ್ಥಿತಿಯೇ ಮುಂದುವರೆದಿದೆ. ಅದು ಭಾರಿ ಕಾರ್ಪೋರೇಟುಗಳ ಹಿಡಿತ, ಭಾರಿ ಆಸ್ತಿವಂತ ವರ್ಗಗಳು ಹಿಡಿತ, ಭಾಷಾ ಹಕ್ಕುಗಳು, ರಾಜ್ಯಗಳ ಹಕ್ಕುಗಳು,...