ಜೆ ಎನ್ ಯು ಮೇಲಿನ ಧಾಳಿಗಳು ಭಾರತದ ವಿಶ್ವ ವಿದ್ಯಾಲಯ ಹಾಗೂ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಮೇಲಿನ ಧಾಳಿಗಳಾಗಿವೆ. ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ ಮತ್ತೆ ಜಾಗತಿಕ ಸುದ್ಧಿಗೆ ಗ್ರಾಸವಾಗಿದೆ. ಸಂಕ್ಷಿಪ್ತವಾಗಿ ಜೆ ಎನ್ ಯು ಎಂದು ಕರೆಯಲ್ಪಡುವ ಈ ಕೇಂದ್ರೀಯ ವಿಶ್ವವಿದ್ಯಾಲಯ ಜಾಗತಿಕ ಮನ್ನಣೆ ಪಡೆದ ಭಾರತದ ವಿಶ್ವ ವಿದ್ಯಾಲಯವಾಗಿದೆ. ಭಾರತದಲ್ಲಿ ಜೆಎನ್ ಯುವಿನಂತಹ ವಿಶ್ವ ವಿದ್ಯಾಲಯ ಬೇರೊಂದಿಲ್ಲ. ಇಲ್ಲಿ ಅತ್ಯಂತ ಅಗ್ಗದಲ್ಲಿ ಉನ್ನತ ಶಿಕ್ಷಣವನ್ನು ಸಮಾಜದ ಎಲ್ಲಾ ಅದರಲ್ಲೂ ದಲಿತ ದಮನಿತ ವರ್ಗದ ವಿದ್ಯಾರ್ಥಿಗಳಿಗೆ ದೊರೆಯುತ್ತಾ ಬಂದಿತ್ತು. ಈ ವಿಶ್ವ ವಿದ್ಯಾಲಯ ಕಳೆದ ಕೆಲವು ವರುಷಗಳಿಂದ ವಿವಾದಗಳ ಕೇಂದ್ರವನ್ನಾಗಿ ಮಾಡಲಾಗುತ್ತಿದೆ. ಹಾಗೆ ಮಾಡುವುದರಲ್ಲಿಆಳುವಂತಹ ಶಕ್ತಿಗಳಿಗೆ ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವ ಉದ್ದೇಶಗಳಿವೆ. ಭೌದ್ಧಿಕವಾಗಿ ಮುಂಚೂಣಿಯಲ್ಲಿರುವ ಈ ವಿಶ್ವ ವಿದ್ಯಾಲಯವನ್ನು ಇಲ್ಲದಂತೆ ಮಾಡುವ ಸಂಚುಗಳು ನಡೆಯುತ್ತಾ ಬಂದಿವೆ. ಈ ಬಗ್ಗೆ ಕರ್ನಾಟಕದ ವಿಶ್ವ ವಿದ್ಯಾಲಯಗಳ ಬೋಧಕ ವಲಯಗಳಲ್ಲಿರುವ ಬಹುತೇಕ ಪ್ರಾಧ್ಯಾಪಕರುಗಳು ಸಣ್ಣ ದನಿಯನ್ನೂ ಕೂಡ ಎತ್ತಲಾಗದಷ್ಟು ಬಲಹೀನರಾಗಿದ್ದಾರೆ ಎನ್ನುವುದು ಕಣ್ಣಿಗೇ ರಾಚುತ್ತಿರುವ ವಿಚಾರ. ಪಡೆಯುತ್ತಿರುವ ಯುಜಿಸಿ ಸಂಬಳ ಹಾಗೂ ಸವಲತ್ತುಗಳು ಅವರ ಕಣ್ಣು ಹಾಗೂ ಮೆದುಳುಗಳಿಗೆ ಗರಬಡಿಸಿದಂತೆ ಕಾಣುತ್ತಿದೆ. ಜವಾಹರಲಾಲ್ ನೆಹರು ವಿಶ್ವ ವಿದ್ಯಾಲಯವನ್ನು 19...