ಮಮತಾ ಬ್ಯಾನೆರ್ಜಿ ಹಿಂದುತ್ವ ಫ್ಯಾಸಿಸಂ ನ ವಿರೋಧಿಯೇ.. ಜಾತ್ಯಾತೀತ ಹಾಗೂ ಪ್ರಜಾತಾಂತ್ರಿಕ ನಾಯಕಿಯೇ...!!! ???? -ನಂದಕುಮಾರ್ ಕೆ ಎನ್. ಕುಂಬ್ರಿ ಉಬ್ಬು. ದಕ್ಷಿಣ ಇಂಡಿಯಾದ ತಮಿಳುನಾಡು, ಕೇರಳ, ಪುದುಚೇರಿ, ಈಶಾನ್ಯ ಇಂಡಿಯಾದ ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ನ ವಿಧಾನ ಸಭಾ ಚುನಾವಣೆಗಳು ಮುಗಿದು ಕೇರಳ ಹೊರತುಪಡಿಸಿದಂತೆ ಎಲ್ಲಾ ರಾಜ್ಯಗಳಲ್ಲಿಈಗ ಹೊಸ ಸರ್ಕಾರಗಳು ರಚನೆಯಾಗಿವೆ. ಈ ಎಲ್ಲಾ ಚುನಾವಣೆಗಳಲ್ಲಿ ಸಂಘಪರಿವಾರದ ಬಿಜೆಪಿ ಪುದುಚೇರಿ ಹಾಗೂ ಅಸ್ಸಾಂನಲ್ಲಿ ಮಾತ್ರ ಅಧಿಕಾರವನ್ನು ಸ್ಥಾಪಿಸಿಕೊಂಡಿದೆ. ಪುದುಚೇರಿ ಒಕ್ಕೂಟ ಸರ್ಕಾರದ ಆಡಳಿತ ಪ್ರದೇಶವಾಗಿರುವುದರಿಂದ ಅಲ್ಲಿನ ಸರ್ಕಾರಕ್ಕೆ ವಿಶೇಷವೇನೂ ಇಲ್ಲ. ಕಳೆದ ಬಾರಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿಯೇ ಹೆಚ್ಚೂ ಕಮ್ಮಿ ಅಧಿಕಾರ ನಡೆಸಿದ್ದು ಗುಟ್ಟೇನೂ ಅಲ್ಲ. ಉಳಿದಂತೆ ಅಸ್ಸಾಂನಲ್ಲಿ ಬಿಜೆಪಿಗೆ ಬಹುಮತವಿಲ್ಲದಿದ್ದರೂ ಇತರ ಶಕ್ತಿಗಳೊಂದಿಗೆ ಸಂಯುಕ್ತರಂಗ ರಚಿಸಿಕೊಂಡು ಅಧಿಕಾರ ಹಿಡಿದುಕೊಂಡಿದೆ. ಉಳಿದಂತೆ ಪಶ್ಚಿಮ ಬಂಗಾಳದಲ್ಲಿ ತನ್ನ ವಿಧಾನ ಸಭಾ ಸದಸ್ಯಬಲವನ್ನು ಹಾಗೇನೆ ಮತ ಗಳಿಕೆಯ ಪ್ರಮಾಣವನ್ನು ಕಳೆದಬಾರಿಗಿಂತ ಹೆಚ್ಚಿಸಿಕೊಂಡಿದ್ದರೂ ಅಧಿಕಾರ ಹಿಡಿಯಲಾಗಲಿಲ್ಲ. ಇನ್ನು ತಮಿಳುನಾಡು ಹಾಗೂ ಕೇರಳದಲ್ಲಿ ಎಷ್ಟೆಲ್ಲಾ ತಿಣುಕಾಡಿದರೂ ಬಿಜೆಪಿಯ ಸಾಧನೆಯೇನೂ ಹೇಳಿಕೊಳ್ಳುವಂತೆ ಇಲ್ಲ. ಕೇರಳದಲ್ಲಿ ಅಯ್ಯಪ್ಪನ...