ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ....2021. --ಮಹಿಳಾ ವಿಮೋಚನೆಯ ಸಾಕಾರಕ್ಕಿರುವ ಅಡ್ಡಿಗಳು-- ಮಾರ್ಚ್ ಎಂಟು ಅಂತರಾಷ್ಟ್ರೀಯ ಮಹಿಳಾ ದಿನ. ನಾವಿಂದು ಎಂತಹ ಧಾರುಣ ಸನ್ನಿವೇಶದಲ್ಲಿ ಜೀವಿಸುತ್ತಿದ್ದೇವೆಂದರೆ ದುಡಿಯುವ ಮಹಿಳೆಯರಿಗಾಗಲೀ, ದಲಿತರಿಗಾಗಲೀ, ಬಡ ಜನಸಾಮಾನ್ಯರಿಗಾಗಲೀ ಬದುಕಲೇ ಸಾಧ್ಯವಾಗದಂತಹ ಪರಿಸ್ಥಿತಿ ಯನ್ನು ಆಳುವವರು ನಿರ್ಮಿಸಿಟ್ಟಿದ್ದಾರೆ. ಅತ್ತ ಸರಕಾರಿ ರಕ್ಷಣೆಯೂ ಇಲ್ಲ. ಇತ್ತ ಸಾಮಾಜಿಕ ರಕ್ಷಣೆಯೂ ಇಲ್ಲದಂತಹ ಸ್ಥಿತಿ ಇದು. ನ್ಯಾಯಾಂಗದಲ್ಲೂ ಇವರ ಜೀವಗಳಿಗೆ ಕಿಮ್ಮತ್ತಿಲ್ಲ. ಅತ್ಯಾಚಾರ ಮಾಡಿದವನಿಗೆ, ನೀನು ಆಕೆಯನ್ನು ಮದುವೆಯಾದರೆ ಪ್ರಕರಣದಿಂದ ಖುಲಾಸೆ ಮಾಡುತ್ತೀನಿ ಎಂದು ದೇಶದ ನ್ಯಾಯಾಂಗದ ಮುಖ್ಯಸ್ಥರೇ ಹೇಳಿರುವ ಪ್ರಕರಣವೂ ನಮ್ಮ ಮುಂದಿದೆ. ಪ್ರೇಮಿಸುತ್ತಿದ್ದ ಮಗಳ ತಲೆಯನ್ನೇ ಕಡಿದು ಪೋಲಿಸರಿಗೆ ಶರಣಾದ, ಹೆಂಡತಿಯ ಮೇಲೆ ಅನುಮಾನ ಹೊಂದಿ ಕಡಿದು ಕೊಂದ, ಬೇರೆ ಜಾತಿ, ಕೋಮಿನವರನ್ನು ಮದುವೆಯಾದ ಇಲ್ಲವೇ ಪ್ರೇಮಿಸಿದ ಕಾರಣಕ್ಕೆ ಬಡಿದು ಕೊಂದ, ಸುಟ್ಟುಕೊಂದ, ದಲಿತ ಹಿನ್ನೆಲೆಯ ಕಾರಣಕ್ಕೆ ಅತ್ಯಾಚಾರ ನಡೆಸಿ ಕೊಂದ, ತನ್ನನ್ನು ಒಪ್ಪಿಕೊಳ್ಳಲಿಲ್ಲವೆಂದು ಆಸಿಡ್ ಎರಚಿ ಸುಟ್ಟ … ..ಹೀಗೆ ಸಾವಿರಾರು ಪ್ರಕರಣಗಳು ದೇಶದ ತುಂಬೆಲ್ಲಾ ನಡೆಯುತ್ತಿರುವುದನ್ನು ನಾವು ಗಮನಿಸಬಹುದು. ಇತ್ತೀಚೆಗಷ್ಟೇ ಕರ್ನಾಟಕದ ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ದಲಿತ ಹುಡುಗಿಯೊಬ್ಬಳ ಮೇಲಿನ ಅತ್ಯಾಚಾರದ ಪ...